ನಾಡೋಜ ಡಾ.ಜಿ.ಶಂಕರ್ ಅವರ ಜನ್ಮ ದಿನವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಅವರ ಚಿಂತನೆ ಹಾಗೂ ಸಮಾಜಮುಖಿ ಆಶಯಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಅರ್ಥಪೂರ್ಣಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಶಿಕ್ಷಣ ಕ್ಷೇತ್ರಕ್ಕೆ ನೆರವು ನೀಡುವುದು, ಅಶಕ್ತರಿಗೆ ಆರೋಗ್ಯದ ವಿಚಾರದಲ್ಲಿ ಸಹಾಯ ಹಸ್ತ ಚಾಚುವುದು, ಪರಿಸರದ ಬಗ್ಗೆ ಕಾಳಜಿ ವಹಿಸುವುದು ಹಾಗೂ ಸಮಾಜದಲ್ಲಿ ಗುರುತಿಸದೆ ಉಳಿದಿರುವ ಸೇವಾ ಮನೋಭಾವದ ವ್ಯಕ್ತಿಗಳನ್ನು ಗೌರವಿಸುವುದು ಇವೆಲ್ಲವೂ ಡಾ.ಜಿ.ಶಂಕರ್ ಅವರ ಸೇವಾ ಮನೋಭಾವಕ್ಕೆ ಸಲ್ಲಿಸುವ ನಿಜವಾದ ಗೌರವ. ಜನ್ಮ ದಿನಾಚರಣೆ ಎಂದರೆ ಕೇವಲ ಶುಭಾಶಯ ಸಲ್ಲಿಸುವ ದಿನವಲ್ಲ. ಸಮಾಜಕ್ಕೆ ನಮ್ಮಿಂದ ಸಾಧ್ಯವಾದಷ್ಟು ಸೇವೆ ಸಲ್ಲಿಸುವ ದಿನವಾಗಬೇಕು ಎಂದು ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲಾ ಅಧ್ಯಕ್ಷ ರವೀಶ್ ಎಸ್. ಕೊರವಡಿ ಹೇಳಿದರು.

ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ, ಕೋಟೇಶ್ವರ ಘಟಕ ಹಾಗೂ ಮಹಿಳಾ ಸಂಘಟನೆಯ ವತಿಯಿಂದ ಸೇವೆಗೆ ಸುದಿನ-ಡಾ.ಜಿ.ಶಂಕರ್ ಜನ್ಮ ದಿನ ಎಂಬ ಆಶಯದಡಿ ಡಾ.ಜಿ.ಶಂಕರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಕೊಮೆ ಬೀಚ್ನಲ್ಲಿ ಜರುಗಿದ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷ ರಾಘವೇಂದ್ರ ಹರಪನಕರೆ ಅಧ್ಯಕ್ಷತೆ ವಹಿಸಿದ್ದರು. ಕೋಟೇಶ್ವರ ಸೇವಾ ಟ್ರಸ್ಟ್ ನ ಸದಸ್ಯ ಜಗದೀಶ್ ಮೊಗವೀರ ಮಾರ್ಕೋಡು, ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ಗೌರವಾಧ್ಯಕ್ಷ ಆನಂದ್ ಕುಂದರ್ ಹಳಅಳಿವೆ, ಜಿಲ್ಲಾ ಸಂಘಟನೆ ಉಪಾಧ್ಯಕ್ಷ ಅಶೋಕ್ ತೆಕ್ಕಟ್ಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಖರ್ ತೋಳಾರ್, ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ ವಿಕ್ರಮ್ ತೆಕ್ಕಟ್ಟೆ, ಕಾರ್ಯದರ್ಶಿ ರಾಜೇಶ್ವರಿ ಮಾರ್ಕೊಡು , ತೆಕ್ಕಟ್ಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶೇಖರ್ ಕಾಂಚನ್, ಸದಸ್ಯ ಗೋಪಾಲ್ ಕೊಮೆ, ಎಸ್ಎಲ್ಆರ್ ಎಮ್ ಘಟಕದ ರೇವತಿ ತೆಕ್ಕಟ್ಟೆ, ಶನೇಶ್ವರ ದೇವಸ್ಥಾನ ಕೊಮೆ ತೆಕ್ಕಟ್ಟೆ ಇದರ ಆಡಳಿತ ಮಂಡಳಿ ಅಧ್ಯಕ್ಷ ನರಸಿಂಹ ಕಾಂಚನ್ ಹಾಗೂ ಬೊಬ್ಬರ್ಯ ದೇವಸ್ಥಾನದ ಅಧ್ಯಕ್ಷರಾದ ಸೋಮ ಕಾಂಚನ್, ರಾಜು ತೋಟದಬೆಟ್ಟು, ಕೊಮೆ ಕೊರವಡಿ ಸೊಸೈಟಿಯ ಚಂದ್ರ ಇಂಬಾಳಿ, ಸುರೇಶ್ ಶಾನಾಡಿ, ಟಿ.ಆರ್.ಮಂಜುನಾಥ್, ಕೋಟೇಶ್ವರ ಘಟಕದ ಮಾಜಿ ಮಹಿಳಾ ಅಧ್ಯಕ್ಷರುಗಳು, ಘಟಕದ ಪದಾಧಿಕಾರಿಗಳು, ಗುರಿಕಾರರು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭ ಡಾ.ಜಿ.ಶಂಕರ್ ಅವರ ಶೈಕ್ಷಣಿಕ ಚಿಂತನೆಯಂತೆ ಬೀಜಾಡಿ ಸರ್ಕಾರಿ ಪ್ರೌಢಶಾಲೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪೀಠೋಪಕರಣಗಳನ್ನು ವಿತರಿಸಲಾಯಿತು. ಆರೋಗ್ಯ ಚಿಂತನೆಯಂತೆ ಅಶಕ್ತರಿಗೆ ಸಹಾಯಧನವನ್ನು ವಿತರಿಸಲಾಯಿತು. ಅವರ ಸಾಮಾಜಿಕ ಚಿಂತನೆಯಂತೆ ತೆಕ್ಕಟ್ಟೆ ಗ್ರಾಮ ಪಂಚಾಯತ್ ಹಾಗೂ ಎಸ್ಎಲ್ ಆರ್ ಎಮ್ ಘಟಕದ ಸಹಯೋಗದಲ್ಲಿ ಸಮುದ್ರ ಕಿನಾರ ಸ್ವಚ್ಛತಾ ಹಾಗೂ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ವಿಶೇಷವಾಗಿ ಮಾನವರ ಅಂತ್ಯಕ್ರಿಯೆಯ ಪುಣ್ಯದ ಮೋಕ್ಷ ಕಾರ್ಯದಲ್ಲಿ ಅತ್ಯಂತ ಮಹತ್ವದ ಸೇವೆ ಸಲ್ಲಿಸುತ್ತಿರುವ ಕೋಟೇಶ್ವರದ ಮೋಕ್ಷ ಸೂರಿ ಹಾಗೂ ತೆಕ್ಕಟ್ಟೆಯ ಚಂದ್ರ ದೇವಾಡಿಗ ಅವರನ್ನು ಗುರುತಿಸಿ ಸನ್ಮಾನಿಸಲಾಯಿತು.
ನಿಕಟಪೂರ್ವ ಅಧ್ಯಕ್ಷ ನಾಗರಾಜ್ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ನಾಗರಾಜ್ ತೆಕ್ಕಟ್ಟೆ ವಂದಿಸಿದರು.




