ಕೋಟೇಶ್ವರ: ಸರ್ಕಾರಿ ಉದ್ಯೋಗದಲ್ಲಿದ್ದು ಕಳಂಕರಹಿತ ಬದುಕನ್ನು ಕಟ್ಟಿಕೊಂಡು ಸಮಾಜದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಜನರ ಮನಗೆದ್ದ ಕಾವಡಿ ನಾರಾಯಣ ಶೆಟ್ಟಿ ಅವರನ್ನು ಸಾಹಿತ್ಯ ಪರಿಷತ್ತು ಅಭಿನಂದಿಸಿರುವುದು ಹೆಮ್ಮೆಯ ವಿಚಾರ. ಇನ್ನಷ್ಟು ಹಿರಿಯರನ್ನು ಗುರುತಿಸಿ ಗೌರವಿಸುವ ಕೆಲಸ ಸಾಹಿತ್ಯ ಪರಿಷತ್ತಿನಿಂದ ಆಗಲಿ. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಮುಳುಗಿರುವ ಇಂದಿನ ಯುವಜನರಲ್ಲಿಯೂ ಸಾಹಿತ್ಯಾಸಕ್ತಿಯನ್ನು ಹೆಚ್ಚಿಸುವ ಕೆಲಸಗಳು ಹೆಚ್ಚು ಹೆಚ್ಚಾಗಿ ನಡೆಯಲಿ ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ವಕ್ವಾಡಿಯ ಕನಕ ನಿವಾಸದಲ್ಲಿ ಶುಕ್ರವಾರ ಜರುಗಿದ ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮದಲ್ಲಿ ಸಮಾಜಪರ ಚಿಂತಕರಾದ ವಕ್ವಾಡಿಯ ನಿವೃತ್ತ ಕಂದಾಯ ಅಧಿಕಾರಿ ಕಾವಡಿ ನಾರಾಯಣ ಶೆಟ್ಟಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ನಿವೃತ್ತ ಪ್ರಾಂಶುಪಾಲ ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ ಅಭಿನಂದನಾ ಮಾತುಗಳನ್ನಾಡಿ, ಕಾವಡಿ ನಾರಾಯಣ ಶೆಟ್ಟಿ ಅವರು ಸಜ್ಜನ ಅಧಿಕಾರಿಯಾಗಿದ್ದವರು. ಅವರ ಪ್ರಾಮಾಣಿಕತೆ ಹಾಗೂ ಸಾಮಾಜಿಕ ಬದ್ಧತೆ ಮತ್ತು ಸಾಮಾಜಿಕ ನ್ಯಾಯದ ಮೂಲಕ ಸೇವೆ ನೀಡಿ ಜನರ ಮನಗೆದ್ದಿದ್ದರು. ಇಂತಹ ಪ್ರಾಮಾಣಿಕ ಹಿರಿಯರನ್ನು ಅವರ ಮನೆ ಬಾಗಿಲಿಗೆ ಬಂದು ಗುರುತಿಸಿ ಸನ್ಮಾನಿಸಿದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಅಭಿನಂದನೀಯ. ಇದಲ್ಲದೆ ನಾರಾಯಣ ಶೆಟ್ಟಿ ಅವರು ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಎನ್ನುವ ಒಳ್ಳೆಯ ಪುತ್ರನನ್ನು ಸಮಾಜಕ್ಕೆ ನೀಡಿ, ವಿದೇಶದಲ್ಲಿ ಸಾವಿರಾರು ಕುಟುಂಬಕ್ಕೆ ಆಸರೆಯಾಗುವಂತೆ ಮಾಡಿದ ಕೀರ್ತಿ ಅವರಿಗಿದೆ ಎಂದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ 155ನೇ ಕಾರ್ಯಕ್ರಮ ಇದಾಗಿದೆ. ಹಿರಿಯರಿಂದ ಹಿಡಿದು ಕಿರಿಯರ ತನಕವೂ ಸಾಹಿತ್ಯವನ್ನು ಹಬ್ಬಿಸುವ ಕೆಲಸ ಪರಿಷತ್ತು ಮಾಡಿಕೊಂಡು ಬರುತ್ತಿದ್ದು, ಇಡೀ ಉಡುಪಿ ಜಿಲ್ಲೆ ಸಾಹಿತ್ಯದ ಚಟುವಟಿಕೆಯಲ್ಲಿ ನಂ.1 ಎಂದು ಗುರುತಿಸಿಕೊಂಡಿದೆ ಎಂದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿ, ಇಡೀ ರಾಜ್ಯದಲ್ಲಿಯೇ ಮೊದಲ ಬಾರಿಗೆ ಉಡುಪಿ ಜಿಲ್ಲೆಯಲ್ಲಿ ಮಾತ್ರ ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಾಹಿತ್ಯಾಸಕ್ತರ ಗಮನ ಸೆಳೆದಿದೆ. ಇದೊಂದು ಹೃದಯಸ್ಪರ್ಶಿ ಕಾರ್ಯಕ್ರಮ ಎಂದರು.

ವೇದಿಕೆಯಲ್ಲಿ ಜಿಲ್ಲಾ ಕೋಶಾಧ್ಯಕ್ಷ ಮನೋಹರ್ ಭಟ್, ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಉಮೇಶ್ ಪುತ್ರನ್, ನಿವೃತ್ತ ಉಪನ್ಯಾಸಕ ಪ್ರೊ. ಉಪೇಂದ್ರ ಸೋಮಯಾಜಿ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭ ಸಮಾಜಪರ ಚಿಂತಕರಾದ ವಕ್ವಾಡಿಯ ನಿವೃತ್ತ ಕಂದಾಯ ಅಧಿಕಾರಿ ಕಾವಡಿ ನಾರಾಯಣ ಶೆಟ್ಟಿ ಹಾಗೂ ಪತ್ನಿ ಸರೋಜಿನಿ ಶೆಟ್ಟಿ ಮತ್ತು ದುಬೈ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರನ್ನು ಸಾಹಿತ್ಯ ಪರಿಷತ್ತಿನಿಂದ ಗುರುತಿಸಿ ಗೌರವಿಸಲಾಯಿತು.

ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ದಿನಕರ್ ಆರ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಅಕ್ಷತಾ ಗಿರೀಶ್ ಸ್ವಾಗತಿಸಿದರು. ತಾಲೂಕು ಕೋಶಾಧ್ಯಕ್ಷ ಮಂಜುನಾಥ್ ಕೆ.ಎಸ್. ವಂದಿಸಿದರು.

ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮ ಹಿರಿಯ ಜೀವಿಗಳ ಆಯಸ್ಸನ್ನು ವೃದ್ಧಿಸುವಂತೆ ಮಾಡಿದೆ. ಈ ಕಾರ್ಯಕ್ರಮವನ್ನು ನಮ್ಮ ನಿವಾಸದಲ್ಲಿ ಆಯೋಜಿಸಿ ನಮ್ಮ ಪೂಜ್ಯರನ್ನು ಅಭಿನಂದಿಸಿದ ಪರಿಷತ್ತಿನ ಕಾರ್ಯಕ್ಕೆ ಇಡೀ ಕುಟುಂಬ ಆಭಾರಿಯಾಗಿದೆ. ನಾನು ದುಬೈಯಲ್ಲಿ ಈಗಾಗಲೇ 12 ವರ್ಷಗಳಿಂದ ಕನ್ನಡ ಪಾಠಶಾಲೆಯನ್ನು ತೆರೆದು ಪೋಷಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ಮಾತೃಭಾಷೆ ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ದೂರದ ದುಬೈಯಲ್ಲಿಯೂ ಸಾಹಿತ್ಯದ ಬಹುತೇಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದೇವೆ.

*- ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ದುಬೈ ಉದ್ಯಮಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು*