ಬಹುತೇಕ ಮಂದಿಗೆ ಗಾಯ, ಮೂವರು ಗಂಭೀರ

ಕುಂದಾಪುರ: ಮುಳ್ಳಿಕಟ್ಟೆ ಅರಾಟೆ ಸೇತುವೆ ಬಳಿ ಭಾನುವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎರಡು ಖಾಸಗಿ ಬಸ್ಗಳಲ್ಲಿದ್ದ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದೆ.

ಕುಂದಾಪುರದಿಂದ ಬೈಂದೂರು ಮಾರ್ಗದಲ್ಲಿ ಚಲಿಸುತ್ತಿದ್ದ ದುರ್ಗಾಂಬಾ ಹೆಸರಿನ ಖಾಸಗಿ ಬಸ್ ಮತ್ತು ಮಂತ್ರಾಲಯದಿಂದ ಮಂಗಳೂರು ಕಡೆಗೆ ಬರುತ್ತಿದ್ದ ಗಣೇಶ್ ಟ್ರಾವೆಲ್ಸ್ ಬಸ್ ನಡುವೆ ನೇರ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಅಪಘಾತದ ತೀವ್ರತೆಗೆ ದುರ್ಗಾಂಬಾ ಬಸ್ಸಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಬಳಿಕ ನಿಯಂತ್ರಣ ತಪ್ಪಿದ ಬಸ್ ಹಿಂದೆ ಬರುತ್ತಿದ್ದ ಸರಕು ಸಾಗಣೆ ವಾಹನಕ್ಕೆ ಗುದ್ದಿದೆ. ಇದರಿಂದ ಸರಕು ವಾಹನದ ಚಾಲಕನಿಗೂ ಗಾಯವಾಗಿದೆ. ಗಾಯಾಳುಗಳನ್ನು ತಕ್ಷಣ ಮಣಿಪಾಲ ಮತ್ತು ಕುಂದಾಪುರದ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಳೀಯರ ನೆರವು:

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಗಂಗೊಳ್ಳಿ ಆಪತ್ಬಾಂಧವ ತಂಡದ ಇಬ್ರಾಹಿಂ, ಅಬ್ಬಾರ್, ವಿಕಾಸ್ ಅವರು ಎರಡು ಆಂಬುಲೆನ್ಸ್ ಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಹೆಮ್ಮಾಡಿ ಭಾಗದ ಆಟೋ ಚಾಲಕರಾದ ಶರತ್, ಕೃಷ್ಣ, ಪ್ರಶಾಂತ್ ಅವರು ಸಹಾಯ ಮಾಡಿದರು.