ಸರ್ಕಾರಕ್ಕೆ ಆಗ್ರಹ ಮಾಡಿದ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ

ಕುಂದಾಪುರ: ದುಡಿಮೆಯ ಒಂದು ಭಾಗವನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಶಿಕ್ಷಣ, ಆರೋಗ್ಯ, ಕಲೆ, ಸಾಹಿತ್ಯ, ಕ್ರೀಡೆ, ಧಾರ್ಮಿಕ ಕ್ಷೇತ್ರಗಳಿಗೆ ನೀಡುತ್ತಿರುವ ನಾಡೋಜ ಡಾ. ಜಿ. ಶಂಕರ್ ಅವರ ಸಮಾಜ ಸೇವೆಯನ್ನು ಗುರುತಿಸಿ, ಅವರನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಸದಸ್ಯರನ್ನಾಗಿ ಸರ್ಕಾರ ಮಾಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆಗ್ರಹಿಸಿದ್ದಾರೆ.

ಮೊಗವೀರ ಯುವ ಸಂಘಟನೆ ಮೂಲಕ ರಕ್ತದಾನದ ಕ್ರಾಂತಿ ಹಾಗೂ ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಮೂಲಕ ಮಣಿಪಾಲ ಆರೋಗ್ಯ ಕಾರ್ಡ್ ನೀಡುವ ಮೂಲಕ ಆರ್ಥಿಕ ಅಶಕ್ತರ ಆರೋಗ್ಯ ಸಮಸ್ಯೆಗೆ ನೆರವು, ಉಚ್ಚಿಲ ದಸರಾ ಮೂಲಕ ಧಾರ್ಮಿಕ ಕಾರ್ಯಕ್ರಮ, ಮೊಗವೀರ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ, ಮೀನುಗಾರಿಕಾ ಜಟ್ಟಿ, ಬಂದರುಗಳ ಅಭಿವೃದ್ಧಿ, ಜಾತಿ-ಧರ್ಮ ನೋಡದೆ ಎಲ್ಲಾ ಆರ್ಥಿಕ ಅಶಕ್ತರಿಗೆ ಆರ್ಥಿಕ ನೆರವು, ದೈಹಿಕ ವಿಕಲಚೇತನರಿಗೆ ಸಹಾಯ, ಕರಾವಳಿಯ ಸರ್ವ ಜಾತಿ, ಸರ್ವ ಸಮುದಾಯದ ದೇವಸ್ಥಾನ, ದೈವಸ್ಥಾನಗಳ ಅಭಿವೃದ್ಧಿಗೆ ಸಹಾಯ ಸೇರಿದಂತೆ ಅದೆಷ್ಟೋ ಸಮಾಜಮುಖಿ ಕಾರ್ಯಕ್ರಮಗಳನ್ನು ಯಾವುದೇ ಸ್ವಾರ್ಥವಿಲ್ಲದೆ ನಡೆಸುತ್ತಿರುವ ನಾಡೋಜ ಡಾ. ಜಿ. ಶಂಕರ್ ಅವರನ್ನು ಈ ಬಾರಿ ರಾಜ್ಯ ಸರ್ಕಾರ ವಿಧಾನ ಪರಿಷತ್ತಿನ ನಾಮನಿರ್ದೇಶನ ಸದಸ್ಯರನ್ನಾಗಿ ಮಾಡಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.