ಸಾಲಿಗ್ರಾಮ FSTP ಯೋಜನೆಗೆ ಹೈಕೋರ್ಟ್ ತಡೆ

ಅಧಿಕಾರ ವ್ಯಾಪ್ತಿ ಮೀರಿದ ಆದೇಶ: ವಕೀಲ ಪವನ್ ಚಂದ್ರಶೆಟ್ಟಿ ವಾದ

ತೆಕ್ಕಟ್ಟೆ: ಸಾಲಿಗ್ರಾಮ ಪಟ್ಟಣ ಪಂಚಾಯತ್ ನ ಮಲತ್ಯಾಜ್ಯ ಸಂಸ್ಕರಣಾ ಘಟಕ (Fstp) ವನ್ನು ಕಾವಡಿ ಗ್ರಾಮದ sarve ನಂ. 98 ರಿಂದ ಕೆದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಳ್ಳೂರು ಗ್ರಾಮದ ಸರ್ವೇ ನಂ. 219/2 ಕ್ಕೆ ಸ್ಥಳಾಂತರಿಸುವ ನಿರ್ಧಾರಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಅರ್ಜಿ ದಾರರ ಪರವಾಗಿ ಹಿರಿಯ ವಕೀಲ ಪವನ್ ಚಂದ್ರಶೆಟ್ಟಿ ವಾದ ಮಂಡಿಸಿ, "ಯೋಜನೆಗೆ ಅನುಮೋದನೆ ನೀಡುವಾಗ ಕಾನೂನುಬದ್ಧ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದ್ದು, ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಆದೇಶಿಸಿದ್ದಾರೆ" ಎಂದು ಪ್ರತಿ ಪಾದಿಸಿದರು.

ಕಾವಡಿ ಜಮೀನಿನ ಮೇಲೆ ಹೈಟೆನ್ಷನ್ ವಿದ್ಯುತ್ ತಂತಿ ಹಾದುಹೋಗುತ್ತದೆ ಎಂಬ ಕಾರಣಕ್ಕೆ ಸ್ಥಳಾಂತರ ಮಾಡಲಾಗಿದೆ ಎಂಬ ನಿರ್ಧಾರ, ಆ ನಿರ್ಧಾರ ಕೈಗೊಳ್ಳಲು ಅಧಿಕಾರಿಗೆ ಅಧಿಕಾರ ಇದೆಯೇ ಎಂಬ ಅಂಶ ಮತ್ತು ಕೃಷಿ ಪ್ರಧಾನ ಉಳ್ತೂರು ಗ್ರಾಮಕ್ಕೆ ಇದರಿಂದಾಗುವ ಹಾನಿ ಏನು ಎಂಬುದನ್ನು ಅರ್ಜಿದಾರರು ಪ್ರಶ್ನಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯ ಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಾಪೀಠವು ಅರ್ಜಿದಾರರ ವಾದವನ್ನು ಪುರಸ್ಕರಿಸಿ ಕಾಮಗಾರಿ ಹಾಗೂ ಪ್ರಕ್ರಿಯೆಗಳಿಗೆ ತಡೆ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ನ.6 ರ ಮಧ್ಯಾಹ್ನ 2.30ಕ್ಕೆ ನಿಗದಿಪಡಿಸಲಾಗಿದ್ದು, ಆ ದಿನಾಂಕದವರೆಗೆ ಮಧ್ಯಂತರ ತಡೆ ನೀಡಿ ಹೈಕೋರ್ಟ್ ಆದೇಶಿಸಿದೆ.

ಪ್ರಮುಖ ವಾದಗಳು ಹೀಗಿದ್ದವು:

ಯೋಜನೆಗಾಗಿ ಜಮೀನಿನ ಮೂಲ ಉದ್ದೇಶ ಬದಲಾಯಿಸುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಮಾತ್ರ ಇದ್ದು, ಯೋಜನಾ ನಿರ್ದೇಶಕರು ಆದೇಶ ಹೊರಡಿಸಿರುವುದು ಕಾನೂನು ಮತ್ತು ನಿಯಮಬಾಹಿರ ಅಧಿಕಾರ ಚಲಾವಣೆಯಾಗಿದೆ. ಇದಲ್ಲದೇ ಸಾಲಿಗ್ರಾಮ ಬ್ರಹ್ಮಾವರ ತಾಲ್ಲೂಕು ವ್ಯಾಪ್ತಿಗೆ ಬಂದರೆ ಪ್ರಸ್ತಾವಿತ ಉಳ್ತೂರು ಗ್ರಾಮ ಕುಂದಾಪುರ ತಾಲ್ಲೂಕು ವ್ಯಾಪ್ತಿಗೆ ಬರುತ್ತದೆ. ಇದರಿಂದ ಇದು ಅಧಿಕಾರ ವ್ಯಾಪ್ತಿ ಉಲ್ಲಂಘನೆಯಾಗಿದೆ.

ಉಳ್ತೂರು ಗ್ರಾಮದ ಸರ್ವೆ ನಂ 219/2ರಲ್ಲಿ 2.17 ಎಕರೆ ಜಮೀನನ್ನು 2011ರಲ್ಲಿ ಘನತ್ಯಾಜ್ಯ ಘಟಕಕ್ಕಾಗಿ ಖರೀದಿಸಲಾಗಿದ್ದು ಸಿವಿಲ್ ನ್ಯಾಯಾಲಯದ ಒ.ಎಸ್.ನಂ. 259/2013 ತೀರ್ಪುನ ನಂತರ ಕೈಬಿಡಲಾಗಿತ್ತು. ಈಗ ಅದೇ ಜಾಗದಲ್ಲಿ ನಿಯಮಬಾಹಿರವಾಗಿ FSTP ನಿರ್ಮಿಸಲು ಹೊರಟಿರುವುದು ಕಾನೂನು ವಿರುದ್ಧವಾಗಿದೆ. ಇದರೊಂದಿಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (NGT) ಮಾರ್ಗಸೂಚಿಗಳು ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಷರತ್ತುಗಳನ್ನಯ ಎಲ್ಲಿಯೂ ಪಾಲಿಸಿಲ್ಲ ಎಂದು ಹಿರಿಯ ವಕೀಲ ಪವನ್ ಚಂದ್ರಶೆಟ್ಟಿ ವಾದ ಮಂಡಿಸಿದರು.

ಈ ಎಲ್ಲಾ ಅಂಶಗಳನ್ನು ಆಲಿಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಾಪೀಠವು ಜಿಲ್ಲಾಡಳಿತ ನಡವಳಿಯ ಮುಂದುವರಿದ ಕ್ರಮಗಳಿಗೆ ಮಧ್ಯಂತರ ತಡೆ ನೀಡಿ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.

............