ಬೆಚ್ಚಿಬಿದ್ದ ಗ್ರಾಮಸ್ಥರು | ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ
ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಕೆದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾನಾಡಿ ಕೊರಗ ಕಾಲೋನಿಯಲ್ಲಿ ತಾಯಿಯೊಬ್ಬರು ತನ್ನ 14 ವರ್ಷದ ವಿಶೇಷ ಚೇತನ ಮಗಳನ್ನು ಹತ್ಯೆ ಮಾಡಿ, ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ಭಾನುವಾರ ಸಂಭವಿಸಿದೆ.
ಶಾನಾಡಿ ನಿವಾಸಿ ಸುಧಾಕರ ಕೊರಗ ಅವರ ಪುತ್ರಿ ಸುಪ್ರಿತಾ (14) ಹಾಗೂ ಪತ್ನಿ ನೇತ್ರಾವತಿ (40) ಮೃತಪಟ್ಟವರು. ಸುಧಾಕರ ಕೊರಗ ದಿನಗೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮಗಳು ಸುಪ್ರಿತಾ ಹುಟ್ಟಿನಿಂದಲೇ ಅಂಗವಿಕಲೆಯಾಗಿದ್ದು, ನಡೆದಾಡಲು ಸಾಧ್ಯವಾಗದೆ ಹಾಸಿಗೆಯಲ್ಲೇ ಇರಬೇಕಾದ ಸ್ಥಿತಿಯಲ್ಲಿದ್ದರು. ಚಿಕಿತ್ಸೆಗೆ ಹಲವು ಪ್ರಯತ್ನ ನಡೆಸಿದರೂ ಫಲ ನೀಡಿರಲಿಲ್ಲ. ಮಗಳ ಆರೈಕೆಯನ್ನು ತಾಯಿ ನೇತ್ರಾವತಿ ಮಾಡುತ್ತಿದ್ದರು.

ಭಾನುವಾರ ಬೆಳಗ್ಗೆ ಸುಧಾಕರ ಕೆಲಸಕ್ಕೆ ತೆರಳಿದ ಬಳಿಕ ಮನೆಯಲ್ಲಿ ಈ ಘಟನೆ ನಡೆದಿದೆ. ಘಟನೆ ನಡೆಯುವಾಗ ಮನೆಯಲ್ಲಿದ್ದ 3 ವರ್ಷದ ಪುತ್ರ ಸುಶಾಂತ್ ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾನೆ ಎಂದು ತಿಳಿದುಬಂದಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ ಎಸ್. ನಾಯ್ಕ್, ಡಿವೈಎಸ್ಪಿ ಬೆಳ್ಳಿಯಪ್ಪ, ವೃತ್ತ ನಿರೀಕ್ಷಕ ಗೋಪಿಕೃಷ್ಣ, ಕೋಟ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಕುಮಾರ್ ಆರ್., ಅಪರಾಧ ವಿಭಾಗದ ಮಹಾಂತೇಶ್ ಹಾಗೂ ಬೆರಳಚ್ಚು, ಶ್ವಾನದಳ ಮತ್ತು ವಿಧಿವಿಜ್ಞಾನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಈ ಸಂದರ್ಭದಲ್ಲಿ ಕೊರಗ ಅಭಿವೃದ್ಧಿ ಸಂಘದ ಅಧ್ಯಕ್ಷ ಗಣೇಶ್ ವಿ., ಕೆದೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಶರತ್ ಕುಮಾರ್ ಹೆಗ್ಡೆ, ಪ್ರಶಾಂತ್ ಶೆಟ್ಟಿ ಉಳ್ತೂರು, ಸುಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





