ಉಳ್ತೂರು: ಬಿಗಿ ಪೋಲಿಸ್ ಭದ್ರತೆಯಲ್ಲಿ FSTP ಘಟಕ ಕಾಮಗಾರಿ ಆರಂಭ

FSTP ಯೋಜನೆಗೆ ಹೈಕೋರ್ಟ್ ಮಧ್ಯಂತರ ತಡೆ| ತಹಶೀಲ್ದಾರ್ ಭೇಟಿ| ಸ್ಥಳೀಯರ ಪ್ರಬಲ ವಿರೋಧ

ತೆಕ್ಕಟ್ಟೆ: ಕೆದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಳ್ತೂರು ಗ್ರಾಮದ ಸರ್ವೇ ನಂ 219/2ರಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ನಿರ್ಮಿಸಲು ಹೊರಟಿರುವ ಮಲತ್ಯಾಜ್ಯ ಸಂಸ್ಕರಣಾ ಘಟಕ(FSTP) ಯೋಜನೆಯ ಕುರಿತು ಉಳ್ತೂರು ಕೆದೂರು ಬೇಳೂರು ಗ್ರಾಮಸ್ಥರಿಂದ ಪುನಃ ಶುಕ್ರವಾರ ಪ್ರಬಲ ವಿರೋಧ ವ್ಯಕ್ತವಾಯಿತು.

ಶುಕ್ರವಾರ ಉಡುಪಿ ಡಿವೈಎಸ್ಪಿ ಬೆಳಿಯಪ್ಪ ಇವರ ನೇತೃತ್ವದಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಇವರ ಸಹಕಾರದೊಂದಿಗೆ ಕೋಟ ಪೊಲೀಸ್ ಠಾಣಾಧಿಕಾರಿ ಪ್ರವೀಣ್ ಹಾಗೂ ಪಿಎಸ್ಐಗಳಾದ ತಿಮ್ಮೇಶ್, ಮಾಲತೇಶ ಮತ್ತಿತರ ಅಧಿಕಾರಿಗಳ ಬಿಗಿ ಭದ್ರತೆಯಲ್ಲಿ ಮಲತ್ಯಾಜ್ಯ ಸಂಸ್ಕರಣಾ ಘಟಕ(FSTP) ಯೋಜನೆಯ ನಿರ್ಮಾಣದ ಕೆಲಸ ಆರಂಭವಾಗಿತ್ತು.

ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಉಳ್ತೂರು ಕೆದೂರು ಬೇಳೂರು ಗ್ರಾಮದ ನೂರಾರು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ FSTP ಘಟಕದ ನಿರ್ಮಾಣಕ್ಕೆ ಪ್ರಬಲವಾಗಿ ವಿರೋಧ ವ್ಯಕ್ತಪಡಿಸಿದ್ದರು. ಈ ಸಂದರ್ಭ ಕಾಮಗಾರಿ ನಡೆಯುವ ಪ್ರದೇಶಕ್ಕೆ ಯಾರು ಪ್ರವೇಶಿಸದಂತೆ ಜಿಲ್ಲೆಯ ವಿವಿಧ ಭಾಗದ ಪೊಲೀಸ್ ಅಧಿಕಾರಿಗಳನ್ನು ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನು ಸ್ಥಳದಲ್ಲಿ ಜಿಲ್ಲಾಡಳಿತ ನಿಯೋಜಿಸಿತ್ತು.

ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಭೇಟಿ:

ಗ್ರಾಮಸ್ಥರ ವಿರೋಧ ವ್ಯಕ್ತವಾಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿ, ಈಗಾಗಲೇ ಕಾಮಗಾರಿ ನಡೆಸಲು ಜಿಲ್ಲಾಧಿಕಾರಿಯವರ ಸೂಚನೆಯಿದೆ. ಇದಾಗಿಯೂ ಕಾಮಗಾರಿ ನಿಲ್ಲಿಸಿಬೇಕೆಂದರೇ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆಯ ಪ್ರತಿಯನ್ನು ನಮಗೆ ನೀಡಿ. ಅಲ್ಲಿಯ ತನಕ ಯಾವುದೇ ಕಾಮಗಾರಿ ನಿಲ್ಲಿಸಲು ಸಾಧ್ಯವಿಲ್ಲ ಎಂದರು. ಈ ಸಂದರ್ಭ ರಾಜಸ್ವ ನೀರಿಕ್ಷಕ ದಿನೇಶ್ ಹೂದಾರ್, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆನಂದ ಜೆ.ಕೆ, ಗ್ರಾಮಾ ಆಡಳಿತಾಧಿಕಾರಿ ದೀಪಿಕಾ ಶೆಟ್ಟಿ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಬಿಗಿ ಪೊಲೀಸ್ ಭದ್ರತೆ: ಉಡುಪಿ ಡಿವೈಎಸ್ಪಿ ಬೆಳಿಯಪ್ಪ, ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ, ಕೋಟ ಪೊಲೀಸ್ ಠಾಣಾಧಿಕಾರಿ ಪ್ರವೀಣ್, ಪಿಎಸ್ಐಗಳಾದ ತಿಮ್ಮೇಶ್, ಮಾಲತೇಶ, ಪುನೀತ್ ಕುಮಾರ್, ಮುಕ್ತಾ ಇವರ ನೇತೃತ್ವದಲ್ಲಿ ಸಿಬ್ಬಂದಿಗಳ ಸಹಕಾರದೊಂದಿಗೆ ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.

ವಕೀಲರಾದ ಅವಿನಾಶ್ ಶೆಟ್ಟಿ ಬೇಳೂರು, ಪ್ರಮುಖ ಹೋರಾಟಗಾರರಾದ ಕೆದೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಮಾಜಿ ಸದಸ್ಯರಾದ ವಿಜಯ ಕುಮಾರ್ ಶೆಟ್ಟಿ, ಜ್ಯೋತಿ ದೇವಾಡಿಗ, ಅವಿನಾಶ್ ಉಳ್ತೂರು, ಪ್ರತಾಪ್ ಶೆಟ್ಟಿ ಉಳ್ತೂರು, ಸುಧೀರ್ ಮಲ್ಯಾಡಿ, ಮಹೇಶ್ ಮತ್ತು ಕೆದೂರು, ಬೇಳೂರು, ಮಲ್ಯಾಡಿ, ಶಾನಾಡಿ ಸುತ್ತಮುತ್ತಲಿನ ಗ್ರಾಮದ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.

...........