ಘಟಕ ನಿರ್ಮಾಣ ಸ್ಥಳಕ್ಕೆ ಸ್ಥಳೀಯರ ಮುತ್ತಿಗೆ| FSTP ಘಟಕ ವಿರೋಧಿಸಿ ಬೃಹತ್ ಪ್ರತಿಭಟನೆ

ತೆಕ್ಕಟ್ಟೆ: ಕೆದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಳ್ತೂರು ಗ್ರಾಮದ ಸರ್ವೆ ನಂ 219/2ರಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ನಿರ್ಮಿಸಲು ಹೊರಟಿರುವ ಮಲತ್ಯಾಜ್ಯ ಸಂಸ್ಕರಣಾ ಘಟಕ(FSTP) ಯೋಜನೆಯ ಕುರಿತು ಉಳ್ತೂರು ಕೆದೂರು ಬೇಳೂರು ಗ್ರಾಮಸ್ಥರಿಂದ ಆ.06 ರಂದು ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ.

ಸೋಮವಾರ ಪೊಲೀಸ್ ಬಿಗಿಭದ್ರತೆಯಲ್ಲಿ ಸಂಬಂಧಪಟ್ಟ ಗುತ್ತಿಗೆದಾರರು ಕಾಮಗಾರಿ ನಡೆಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭಿಸಿದ ಕೂಡಲೇ ಎಚ್ಚೆತ್ತುಕೊಂಡ 3 ಗ್ರಾಮದ ಗ್ರಾಮಸ್ಥರು ಘಟಕ ನಿರ್ಮಿಸುವ ಸ್ಥಳದಲ್ಲಿ ಜಮಾಯಿಸಿ ಕಾಮಗಾರಿ ನಿಲ್ಲುಸುವಂತೆ ವ್ಯಾಪಕ ಆಕ್ರೋಶ ವ್ಯಕ್ತ ಪಡಿಸಿದರು.

ಈ ಸಂದರ್ಭ ಮಧ್ಯಪ್ರವೇಶಿಸಿದ ಕೋಟ ಪೊಲೀಸ್ ಠಾಣಾಧಿಕಾರಿ ಪ್ರವೀಣ್ ನೆರೆದ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ ಜಿಲ್ಲಾಧಿಕಾರಿಯವರ ಅದೇಶದಂತೆ ಕಾಮಗಾರಿ ನಡೆಸಲು ಗುತ್ತಿಗೆದಾರರು ಮುಂದಾಗಿದ್ದಾರೆ. ಕಾನೂನು ಪಾಲನೆ ಅತಿ ಮುಖ್ಯವಾಗಿ ಗ್ರಾಮಸ್ಥರು ಪಾಲಿಸಬೇಕು ಎಂದು ಸ್ಥಳೀಯ ಹೋರಾಟಗಾರರನ್ನು ಮನವಲಿಸಲು ಪ್ರಯತ್ನಿಸಿದರೂ ಕೂಡ ಸ್ಥಳೀಯರು ಮುಂದಿನ ಶಾಂತಿಯುತ ಮತ್ತು ಕಾನೂನಾತ್ಮಕ ಪ್ರತಿಭಟನೆಗೆ ಮುಂದಾಗಿದ್ದಾರೆ.

ಪ್ರಮುಖ ಹೋರಾಟಗಾರರಾದ ಕೆದೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಕೆದೂರು ಗ್ರಾಪಂ ಮಾಜಿ ಅಧ್ಯಕ್ಷ ಸಂಪತ್ತು ಕುಮಾರ್ ಶೆಟ್ಟಿ ಶಾನಾಡಿ, ಮಾಜಿ ಸದಸ್ಯರಾದ ವಿಜಯ ಕುಮಾರ್ ಶೆಟ್ಟಿ, ಜ್ಯೋತಿ ದೇವಾಡಿಗ, ಸುಧೀರ್ ಮಲ್ಯಾಡಿ, ಅವಿನಾಶ್ ಉಳ್ತೂರು, ಪ್ರತಾಪ್ ಶೆಟ್ಟಿ ಉಳ್ತೂರು, ಗಣೇಶ್ ಶೆಟ್ಟಿ ಉಳ್ತೂರು ಸೇರಿದಂತೆ ಕೆದೂರು, ಬೇಳೂರು ಗ್ರಾಮದ ಗ್ರಾಮಸ್ಥರು, ಸ್ಥಳೀಯ ನಾನಾ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.

ಬಿಗಿ ಪೊಲೀಸ್ ಭದ್ರತೆ: ಉಡುಪಿ ಡಿವೈಎಸ್ಪಿ ಬೆಳಿಯಪ್ಪ, ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ, ಕೋಟ ಪೊಲೀಸ್ ಠಾಣಾಧಿಕಾರಿ ಪ್ರವೀಣ್, ಪಿಎಸ್ಐಗಳಾದ ಮಾಲತೇಶ, ಪುನೀತ್, ಮುಕ್ತಾ ಇವರ ನೇತೃತ್ವದಲ್ಲಿ ಸಿಬ್ಬಂದಿಗಳ ಸಹಕಾರದೊಂದಿಗೆ ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.

ಇಂದು ಬೃಹತ್ ಪ್ರತಿಭಟನೆ: ಉಳ್ತೂರು ಗ್ರಾಮದ ವ್ಯಾಪ್ತಿಯಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ನಿರ್ಮಾಣ ಮಾಡಲು ಹೊರಟಿರುವ ಮಲತ್ಯಾಜ್ಯ ಸಂಸ್ಕರಣಾ ಘಟಕವನ್ನ ವಿರೋಧಿಸಿ ಆ.06ರಂದು ಉಳ್ತೂರು ಕೆದೂರು ಬೇಳೂರು ಗ್ರಾಮಸ್ಥರು ಯೋಜನಾ ಪ್ರದೇಶದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲಿದ್ದಾರೆ. ಈ ಸಂದರ್ಭ 3 ಗ್ರಾಮದ ಗ್ರಾಮಸ್ಥರು ಸ್ವಯಂ ಪ್ರೇರಿತ ಅಂಗಡಿ ಮುಗ್ಗಟ್ಟು ಬಂದ್ ಮಾಡುವ ಮೂಲಕ ಉಳ್ತೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ಯೋಜನಾ ಪ್ರದೇಶದ ತನಕ ಶಾಂತಿಯುತ ಪಾದಯಾತ್ರೆಯನ್ನು ನಡೆಸಲಿದ್ದಾರೆ.

ಜಿಲ್ಲಾಡಳಿತದ ಹಟಕ್ಕೆ ಬಿದ್ದು ಗ್ರಾಮಸ್ಥರ ವಿರೋದದ ನಡುವೆಯೂ ಕೂಡ ಕಾಮಗಾರಿ ನಡೆಸಲು ಮುಂದಾಗಿರುವ ಗುತ್ತಿಗೆದಾರರು ಹಾಗೂ ಸ್ಥಳೀಯರಬದುಕುವ ಹಕ್ಕು ಮತ್ತು ಗದಾಪ್ರಹಾರ ಮಾಡುತ್ತಿರುವ ಸಾಲಿಗ್ರಾಮ ಪಟ್ಟಣ ಪಂಚಾಯತ್ ವಿರುದ್ದ ಪ್ರತಿಭಟನೆಗೆ ಶಾಸಕರು ಸಂಸದರು, ಜಿಲ್ಲಾಡಳಿತ, ತಾಲೂಕು ಅಡಳಿತ, ಪ್ರತಿಭಟನಾ ಸ್ಥಳಕ್ಕೆ ಬಂದು ಆವಾಹಲು ಸ್ವೀಕರಿಸಿ ಸ್ಥಳೀಯರ ಬೇಡಿಕೆಗೆ ಸ್ಪಂದಿಸದಿದ್ದರೆ ಮುಂದಿನ ಎಲ್ಲ ಚುನಾವಣೆಗಳನ್ನು ಬಹಿಷ್ಕಾರ ಮಾಡಲಿದ್ದೇವೆ ಎಂಬುದಾಗಿ ಹೋರಾಟಗಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಾಸಕರ ಭೇಟಿ:

ಉಳ್ತೂರು ಗ್ರಾಮದ ವ್ಯಾಪ್ತಿಯಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ನಿರ್ಮಾಣ ಮಾಡಲು ಹೊರಟಿರುವ ಮಲತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಸ್ಥಳೀಯರ ವಿರೋಧ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಸೋಮವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಇವರು ದೂರವಾಣಿ ಮೂಲಕ ಜಿಲ್ಲಾಧಿಕಾರಿಯವರನ್ನು ಸಂಪರ್ಕಿಸಿ ಸ್ಥಳೀಯರ ವಿರೋಧವಿರುವ ಕುರಿತು ಮಾತನಾಡಿ ತಕ್ಷಣವೇ 1 ವಾರಗಳ ತನಕ ಯಾವುದೇ ಕೆಲಸ ಕಾರ್ಯಗಳು ನಡೆಸದಂತೆ ಸೂಚಿಸಿದರು. ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.